ಮಂಗಳೂರು, ಜ.23: ನಗರದ ಕೆಎಸ್ಸಾರ್ಟಿಸಿ ಬಳಿಯ ಮಸಾಜ್ ಸೆಂಟರ್ ಒಂದಕ್ಕೆ ರಾಮ ಸೇನೆ ಕಾರ್ಯಕರ್ತರು ದಾಳಿ ನಡೆಸಿದ್ದು, ವೈಶ್ಯಾವಾಟಿಕೆ ದಂಧೆ ನಡೆಸುತ್ತಿರುವುದಾಗಿ ಆರೋಪಿಸಿದ್ದಾರೆ. ಬಿಜೈ ಕೆಎಸ್ಸಾರ್ಟಿಸಿ ಬಳಿಯಿರುವ ಕಲರ್ಸ್ ಹೆಸರಿನ ಮಸಾಜ್ ಸೆಂಟರಿಗೆ ಇಂದು(ಜ.23) ಮಧ್ಯಾಹ್ನ ಹೊತ್ತಿಗೆ ಕೆಲವಾರು ಕಾರ್ಯಕರ್ತರು ಸೇರಿ ದಾಳಿ ನಡೆಸಿದ್ದಾರೆ. ಶ್ರೀರಾಮ ಸೇನೆ ಸಂಘಟನೆಯ ಪ್ರಸಾದ್ ಅತ್ತಾವರ ನೇತೃತ್ವದ ಹುಡುಗರು ದಾಳಿ ನಡೆಸಿದ್ದಾಗಿ ತಿಳಿದುಬಂದಿದೆ.
ಮಸಾಜ್ ಪಾರ್ಲರ್ ಒಳಗಿನ ಪೀಠೋಪಕರಣ, ಕಂಪ್ಯೂಟರ್ ಸೆಟ್, ಟೇಬಲ್ ಗಳನ್ನು ಪುಡಿಗಟ್ಟಿದ್ದು, ಅಲ್ಲಿದ್ದ ಹುಡುಗಿಯರಿಗೆ ನೀವು ವೈಶ್ಯಾವಾಟಿಕೆ ದಂಧೆ ನಡೆಸುತ್ತಿದ್ದೀರಾ ಎಂದು ಆವಾಜ್ ಹಾಕಿದ್ದಾರೆ. ಹುಡುಗಿಯರು ಕೈಮುಗಿದು ಹಲ್ಲೆ ಮಾಡಬೇಡಿ ಎಂದು ಬೇಡಿಕೊಳ್ಳುವ ವಿಡಿಯೋ ಇದೆ. ಕಾರ್ಯಕರ್ತರೇ ಜೊತೆಗೆ ಕ್ಯಾಮರಾಮನ್ ಒಬ್ಬನನ್ನು ಕರೆದೊಯ್ದು ದಾಳಿ ನಡೆಸಿರುವಂತೆ ತೋರುತ್ತಿದೆ. ಇದರ ವಿಡಿಯೋವನ್ನು ಕಾರ್ಯಕರ್ತರೇ ಬಿಡುಗಡೆ ಮಾಡಿದ್ದಾರೆ.
ಮಾಹಿತಿ ಪ್ರಕಾರ, ಈ ಮಸಾಜ್ ಪಾರ್ಲರನ್ನು ಒಂದು ವರ್ಷದಿಂದ ನಡೆಸುತ್ತಿದ್ದು, ಸುಧೀರ್ ಎಂಬವರಿಗೆ ಸೇರಿದ್ದಾಗಿದೆ. ಮಂಗಳೂರು ನಗರದಲ್ಲಿ ಈ ರೀತಿಯ 16 ಮಸಾಜ್ ಸೆಂಟರ್ ಗಳಿದ್ದು, ಕೆಲವು ಪರವಾನಗಿ ಹೊಂದಿಲ್ಲದೆಯೂ ನಡೆಯುತ್ತಿದೆ ಎಂಬ ಆರೋಪಗಳಿವೆ. ಇತ್ತೀಚೆಗೆ ಮಂಗಳೂರಿನ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಇದೇ ರೀತಿ ಕೇಂದ್ರವೊಂದಕ್ಕೆ ದಾಳಿ ನಡೆಸಿದ್ದು ವಿಡಿಯೋ ವೈರಲ್ ಆಗಿತ್ತು. ಆದರೆ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ. ಅಕ್ರಮ ಮಸಾಜ್ ಪಾರ್ಲರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಿಂದು ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದರೂ, ಕ್ರಮ ಜರುಗಿಸಿಲ್ಲ. ಇದೀಗ ಶ್ರೀರಾಮ ಸೇನೆ ಕಾರ್ಯಕರ್ತರು ದಾಳಿ ನಡೆಸಿದ್ದು, ಕ್ರಮಕ್ಕೆ ಆಗ್ರಹ ಮಾಡಿದ್ದಾರೆ.
ದಾಳಿ ಮಾಡಿದ್ದವರನ್ನು ತಕ್ಷಣ ಬಂಧಿಸುವಂತೆ ಜಿ.ಪರಮೇಶ್ವರ್ ಸೂಚನೆ : ಘಟನೆ ಬಗ್ಗೆ ಉಡುಪಿಯಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದು, ದಾಳಿ ಮಾಡಿದ್ದವರನ್ನು ತಕ್ಷಣ ಬಂಧಿಸಲು ನಾನು ಸೂಚಿಸಿದ್ದೇನೆ. ಯಾವ ಉದ್ದೇಶಕ್ಕೆ ದಾಳಿಯಾಗಿದೆ ಗೊತ್ತಿಲ್ಲ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಸೂಚನೆ ಕೊಟ್ಟಿದ್ದೇನೆ. ಇಂತಹ ಕೃತ್ಯಗಳು ನಡೆಯಬಾರದು. ಯಾರಿಗೂ ವ್ಯಾಪಾರ ಮಾಡಿಕೊಳ್ಳುವುದಕ್ಕೆ ಅಡ್ಡಿಪಡಿಸಬಾರದು. ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದ್ದಾರೆ.
ಅನೈತಿಕ ಚಟುವಟಿಕೆ ನಡೆಸುವ ಪಾರ್ಲರ್ಗಳಿದ್ದರೆ ದೂರು ಕೊಡಿ. ದೂರು ಕೊಟ್ಟರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಕಾರ್ಪೊರೇಷನ್ನವರು ಟ್ರೇಡ್ ಲೈಸೆನ್ಸ್ ಕೊಟ್ಟಿರುತ್ತಾರೆ. ಯಾವ ಕಂಡೀಷನ್ ಹಾಕಿ ಕೊಟ್ಟಿರ್ತಾರೆ ಅದನ್ನು ಪಾಲಿಸದಿದ್ದರೆ, ನಿಯಮಾವಳಿಗಳನ್ನು ಮೀರಿ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post