ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ಇಬ್ಬರ ಸಾವಿಗೆ ಕಾರಣವಾದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಸೆರೆ ಹಿಡಿಯುವಲ್ಲಿ ಗುರುವಾರ ಯಶಸ್ವಿಯಾಗಿದೆ. ರೆಂಜಿಲಾಡಿ ಗ್ರಾಮದ ನೈಲಾದಲ್ಲಿ ಸೋಮವಾರ ಮುಂಜಾನೆ ಆನೆ ದಾಳಿಯಿಂದ ಸ್ಥಳೀಯ ನಿವಾಸಿಗಳಾದ ರಂಜಿತಾ (22) ಹಾಗೂ ರಮೇಶ್ ರೈ (55) ಮೃತಪಟ್ಟಿದ್ದರು. ಅವರ ಮೇಲೆ ದಾಳಿ ನಡೆಸಿದ ಆನೆಯಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ದುಬಾರೆ ಶಿಬಿರದಿಂದ ಐದು ಆನೆಗಳನ್ನು ಕಾರ್ಯಾಚರಣೆ ಸಲುವಾಗಿ ಕರೆಯಿಸಿಕೊಳ್ಳಲಾಗಿತ್ತು. ಮೂರು ದಿನಗಳ ಕಾಲ ಕಾಡಿನಲ್ಲಿ ಆನೆ ಹಿಡಿಯುವ ಕಾರ್ಯಾಚರಣೆ ನಡೆದಿದೆ. ಗುರುವಾರ ಸಂಜೆ ಆನೆ ಪತ್ತೆಯಾಗುತ್ತಲೇ ತಜ್ಞ ವೈದ್ಯರು ಅರಿವಳಿಕೆ ಚುಚ್ಚುಮದ್ದು ಬಿಟ್ಟು ಆನೆಯನ್ನು ಸೆರೆಹಿಡಿಯುವ ಕೆಲಸ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ಇಬ್ಬರನ್ನು ಬಲಿ ತೆಗೆದುಕೊಂಡ ಘಟನೆ ಬಳಿಕ ಅರಣ್ಯ ಸಿಬಂದಿ ‘ಆಫರೇಷನ್ ಎಲಿಫೆಂಟ್’ ಕಾರ್ಯಾಚರಣೆ ಆರಂಭಿಸಿದ್ದರು.



‘ಕೊಂಬಾರು ಸಮೀಪದ ಮೂಜೂರು ಮೀಸಲು ಅರಣ್ಯದಲ್ಲಿ ಆನೆಯು ಪತ್ತೆಯಾಗಿದೆ. ರೆಂಜಿಲಾಡಿ ಗ್ರಾಮದ ನೈಲಾದಲ್ಲಿ ಮನುಷ್ಯರ ಮೇಲೆ ದಾಳಿ ನಡೆಸಿದ ಸ್ಥಳದಿಂದ ಸುಮಾರು 5 ಕಿ.ಮೀ ದೂರದಲ್ಲಿ ಅರಿವಳಿಕೆ ಮದ್ದು ಹಾರಿಸಿ ಆನೆಯನ್ನು ಸೆರೆ ಹಿಡಿದಿದ್ದೇವೆ. ಒಟ್ಟು ನಾಲ್ಕು ಆನೆಗಳು ಈ ಕಾಡಿನಲ್ಲಿ ಪರಿಸರದಲ್ಲಿ ಕಾಣಿಸಿಕೊಂಡಿದ್ದವು ಆದರೆ ಈ ಭಾಗದ ಅರಣ್ಯ ಪ್ರದೇಶದಲ್ಲಿ ಇನ್ನಷ್ಟು ಕಾಡಾನೆಗಳು ಅವಿತುಕೊಂಡಿರುವ ಮಾಹಿತಿಗಳಿವೆ. ಹೀಗಾಗಿ ಯಾವ ಆನೆ ಅಂದು ದಾಳಿ ನಡೆಸಿತ್ತು ಎನ್ನುವುದನ್ನು ನೋಡಿದವರಿಲ್ಲ. ಬಂಧನ ಆಗಿರುವ ಆನೆಯನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಈ ಒಂಟಿ ಸಲಗವೇ ಇಬ್ಬರನ್ನು ಬಲಿಪಡೆದಿತ್ತು. ಇದನ್ನು ಖಚಿತಪಡಿಸಿಕೊಂಡು ಒಂಟಿ ಸಲಗವನ್ನು ಮಾತ್ರ ಸೆರೆಹಿಡಿದಿದ್ದೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಉಪಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಕುಮಾರ್ ಮಾಧ್ಯಮಕ್ಕೆ ತಿಳಿಸಿದರು.
Discover more from Coastal Times Kannada
Subscribe to get the latest posts sent to your email.








Discussion about this post