ಮಂಗಳೂರು, ನ.26: ಶಾಲೆಯಿಂದ ಮನೆ ಕಡೆಗೆ ನಡೆದುಕೊಂಡು ರಸ್ತೆ ದಾಟುತ್ತಿದ್ದ ಎರಡನೇ ತರಗತಿ ವಿದ್ಯಾರ್ಥಿ ಬಾಲಕನಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಬಾಲಕ ಮೃತಪಟ್ಟ ಘಟನೆ ನಗರದ ಕಂಕನಾಡಿಯಲ್ಲಿ ನಡೆದಿದೆ.
ಗದಗ ಜಿಲ್ಲೆಯ ರೋಣ ಮೂಲದ ಮಂಗಳೂರಿನಲ್ಲಿ ಕೂಲಿ ಕಾರ್ಮಿಕರಾಗಿರುವ ಲಕ್ಷ್ಮೀ – ಅಶೋಕ್ ಎಂಬ ದಂಪತಿಯ ಮಗ ವಿಶ್ವಾಸ್ (8) ಮೃತ ಬಾಲಕ. ಕಂಕನಾಡಿಯಲ್ಲಿ ಸೈಂಟ್ ಜೋಸೆಫ್ ಅನುದಾನಿತ ಶಾಲೆಯಲ್ಲಿ ಎರಡನೇ ಕ್ಲಾಸ್ ಕಲಿಯುತ್ತಿದ್ದ ಬಾಲಕ ಬುಧವಾರ ಸಂಜೆ ಶಾಲೆ ಬಿಟ್ಟ ನಂತರ ಹೊರಗೆ ಬಂದಿದ್ದ. ಯಾವಾಗಲೂ ತಾಯಿ ಕರೆದೊಯ್ಯಲು ಬರುತ್ತಿದ್ದು ತಾಯಿ ಬರದೇ ಇದ್ದುದರಿಂದ ಶಾಲೆಯಿಂದ ಹೊರಗೆ ಬಂದಿದ್ದ ಹುಡುಗ ಕಂಕನಾಡಿ- ಫಳ್ನೀರ್ ರಸ್ತೆ ಬದಿಯಲ್ಲಿ ಮನೆ ಕಡೆಗೆ ನಡೆದು ಹೋಗಲು ರಸ್ತೆ ದಾಟಿದ್ದ. ಈ ವೇಳೆ, ಸ್ಟೇಟ್ ಬ್ಯಾಂಕ್ ಕಡೆಗೆ ತೆರಳುತ್ತಿದ್ದ ರಾಜಲಕ್ಷ್ಮಿ ಎನ್ನುವ 4 ನಂಬರಿನ ಬಸ್ ಡಿಕ್ಕಿಯಾಗಿದ್ದು ಅದರ ಎಡಬದಿಯ ಹಿಂಭಾಗದ ಚಕ್ರ ಹರಿದು ಬಾಲಕ ತೀವ್ರ ಗಾಯಗೊಂಡಿದ್ದಾನೆ.
ಕೂಡಲೇ ಬಾಲಕನನ್ನು ಬಸ್ಸಿನ ಸಿಬಂದಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಒಯ್ದಿದ್ದು ಸಂಜೆಯ ವೇಳೆಗೆ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಬಸ್ ತಾಗಿದ ರಭಸಕ್ಕೆ ವಿದ್ಯಾರ್ಥಿ ರಸ್ತೆಗೆ ಎಸೆಯಲ್ಪಟ್ಟಿದ್ದು ದೇಹದ ಒಂದು ಬದಿಗೆ ತೀವ್ರ ಪೆಟ್ಟು ಬಿದ್ದಿತ್ತು. ಬಸ್ ಚಾಲಕನ ನಿರ್ಲಕ್ಷ್ಯದ ಬಗ್ಗೆ ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.






Discussion about this post