ಉಳ್ಳಾಲ, ನ.26: ಉಳ್ಳಾಲದ ರಾಜರಸ್ತೆಯ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸುವ ನೆಪದಲ್ಲಿ ಉಳ್ಳಾಲ ಬೈಲಿನ ವೈದ್ಯನಾಥ ದೈವದ ಕಟ್ಟೆಯನ್ನ ತೆರವುಗೊಳಿಸಲು ಬಂದ ಅಧಿಕಾರಿಗಳನ್ನ ಸ್ಥಳೀಯರು ಹಿಮ್ಮೆಟ್ಟಿಸಿದ್ದು ಕಟ್ಟೆ ತೆರವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಳ್ಳಾಲ ಬೈಲಿನ ಗದ್ದೆಯಲ್ಲಿ ವರ್ಷಂಪ್ರತಿ ಜನವರಿ ತಿಂಗಳಲ್ಲಿ ವೈದ್ಯನಾಥ ದೈವದ ವಲಸರಿ ಕಟ್ಟೆ ಜಾತ್ರೆ ನಡೆಯುವ ಪ್ರದೇಶವು ಪುರಾಣ ಪ್ರಸಿದ್ಧವಾಗಿದ್ದು ಅನೇಕ ಭಕ್ತಾದಿಗಳ ಆರಾಧನೀಯ ಸ್ಥಳವಾಗಿದೆ. ಈ ಪ್ರದೇಶದ ರಸ್ತೆ ಬದಿಯಲ್ಲೇ ವೈದ್ಯನಾಥ ದೈವಕ್ಕೆ ಸಂಬಂಧಿಸಿದ ಕದಂಬ ವೃಕ್ಷವನ್ನೊಳಗೊಂಡ ಕಟ್ಟೆಯೊಂದಿದೆ. ಉಳ್ಳಾಲ ರಾಜರಸ್ತೆ ಇಕ್ಕೆಲಗಳಿಗೆ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಆ ನಿಟ್ಟಿನಲ್ಲಿ ಅಧಿಕಾರಿಗಳು ಕಟ್ಟೆ ತೆರವಿಗೆ ಮುಂದಾಗಿದ್ದರು.
ಅದರೆ ಸ್ಥಳೀಯ ವೈದ್ಯನಾಥ ಭಕ್ತರಿಂದ ಕಟ್ಟೆ ತೆರವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಅಧಿಕಾರಿಗಳ ಕ್ರಮಕ್ಕೆ ತಡೆ ಹಾಕಿದ್ದಾರೆ. ಅಧಿಕಾರಿಗಳು ರಾತ್ರಿ ಕಟ್ಟೆ ತೆರವುಗೊಳಿಸಬಹುದೆಂಬ ಕಾರಣಕ್ಕೆ ಗುರುವಾರ ರಾತ್ರಿ ಸ್ಥಳೀಯ ನೂರಾರು ಭಕ್ತಾದಿಗಳು ವೈದ್ಯನಾಥ ಕಟ್ಟೆಯ ಬಳಿ ಜಮಾಯಿಸಿದ್ದಾರೆ.
ಉಳ್ಳಾಲ ಠಾಣಾ ಪಿಐ ಸಂದೀಪ್ ಅವರು ಸ್ಥಳಕ್ಕೆ ಆಗಮಿಸಿ ಸಂಬಂಧ ಪಟ್ಟ ಲೋಕೋಪಯೋಗಿ ಇಂಜಿನಿಯರ್ ಬಳಿ ಚರ್ಚಿಸಿ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುವ ಬಗ್ಗೆ ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.