ಮಂಗಳೂರು, ಸೆ 28: ಕರಾವಳಿ ಭಾಗದಲ್ಲಿ ಮತ್ತೆ ಪ್ರತೀಕಾರದ ಹೆಸರಿನಲ್ಲಿ ರಕ್ತಪಾತ ಹರಿಸಲು ದೊಡ್ಡ ಮಟ್ಟದ ಸಂಚು ನಡೆದಿತ್ತೇ ಎಂಬ ಅನುಮಾನ ಮೂಡಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು 25 ಲಕ್ಷ ರೂಪಾಯಿ ಸುಪಾರಿ ಡೀಲ್ ಮಾತನಾಡಲಾಗಿದ್ದ ಗಂಭೀರ ಆರೋಪ ಕೇಳಿಬಂದಿದೆ. ಈ ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದ ಯುವಕನೊಬ್ಬ ಮನಪರಿವರ್ತನೆಯಾಗಿ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡುವ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತೊಟ್ಟು ಕಾಶಿಪಟ್ಲ ನಿವಾಸಿ ಅಭಿಷೇಕ್ ದೂರು ನೀಡಿದ ಯುವಕ. ಅಭಿಷೇಕ್‌ನನ್ನು, 2025ರ ಮೇ ತಿಂಗಳಲ್ಲಿ ಸುಹಾಸ್ ಶೆಟ್ಟಿ ಹತ್ಯೆಯಾದ ಬಳಿಕ ಉಡುಪಿಯ ಸುದೀಪ್ ಎಂಬಾತ ಸಂಪರ್ಕಿಸಿದ್ದ. “ಒಬ್ಬ ಹಿಂದುವಿನ ಹತ್ಯೆಗೆ ಪ್ರತಿಯಾಗಿ ಮುಸ್ಲಿಂ ವ್ಯಕ್ತಿಯನ್ನು ಕೊಲೆ ಮಾಡಲೇಬೇಕು” ಎಂದು ಪ್ರತೀಕಾರದ ಮಾತುಗಳನ್ನಾಡಿದ್ದ ಎಂದು ಆರೋಪಿಸಲಾಗಿದೆ.
25 ಲಕ್ಷ ರೂ. ಸುಪಾರಿ ಮತ್ತು ಜೈಲಿಗೆ ಹೋದರೆ ಮಾಸಿಕ ಖರ್ಚಿನ ಭರವಸೆ!: ನಾಲ್ಕು ತಿಂಗಳ ಹಿಂದೆ ಅಭಿಷೇಕ್ ಹಾಗೂ ಆತನ ಸ್ನೇಹಿತ ಕೀರ್ತನ್‌ನನ್ನು ಉಡುಪಿಗೆ ಕರೆಸಿಕೊಂಡ ಸುದೀಪ್, ಮಹೇಶ್ ಎಂಬಾತನನ್ನು ಪರಿಚಯಿಸಿ ಕೊಲೆ ಯೋಜನೆ ರೂಪಿಸಿದ್ದ. ಬಜ್ಪೆ ಕಿನ್ನಿಪದವಿನ ವ್ಯಕ್ತಿಯೊಬ್ಬರ ಫೋಟೋ ನೀಡಿ ಹತ್ಯೆ ಮಾಡಲು ಸೂಚಿಸಲಾಗಿತ್ತು. ಈ ಕೃತ್ಯ ಎಸಗಿದರೆ ಒಟ್ಟು 24 ರಿಂದ 25 ಲಕ್ಷ ರೂಪಾಯಿ ನೀಡುವುದಾಗಿಯೂ, ಜೈಲಿಗೆ ಹೋದರೆ ಕುಟುಂಬದ ನಿರ್ವಹಣೆಗೆ ಪ್ರತಿ ತಿಂಗಳು 15,000 ರೂ. ಹಣ ಮತ್ತು 5,000 ರೂ. ಮೌಲ್ಯದ ದಿನಸಿ ನೀಡುವುದಾಗಿ ಭರವಸೆ ನೀಡಲಾಗಿತ್ತು. ದೂರುದಾರ ಅಭಿಷೇಕ್ ಕೊಲೆಗೆ ಎರಡು ತಲವಾರ್‌ಗಳನ್ನು ಸಹ ಸಿದ್ಧಪಡಿಸಿಕೊಂಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಪತ್ನಿಯ ಹೆರಿಗೆ ಬಳಿಕ ಬದಲಾದ ಮನಸ್ಸು! ಹತ್ಯೆ ಮಾಡಲು ಆರೋಪಿಗಳಿಂದ ಪದೇ ಪದೆ ಒತ್ತಡ ಬರುತ್ತಿದ್ದ ಸಮಯದಲ್ಲೇ ದೂರುದಾರ ಅಭಿಷೇಕ್ ಅವರ ಪತ್ನಿಗೆ ಹೆರಿಗೆಯಾಗಿದೆ. ಮಗುವಿನ ಜನನದ ನಂತರ ಮನಸ್ಸು ಪರಿವರ್ತನೆಗೊಂಡ ಅಭಿಷೇಕ್, ಇನ್ನು ಜೈಲು ಸೇರಿದರೆ ಕುಟುಂಬ ಅನಾಥವಾಗುತ್ತದೆ ಎಂಬ ಭಯದಿಂದ ಕೃತ್ಯದಿಂದ ಹಿಂದೆ ಸರಿದಿದ್ದಾರೆ. ಬಳಿಕ ಆರೋಪಿಗಳೊಂದಿಗೆ ನಡೆಸಿದ್ದ ವಾಟ್ಸಾಪ್ ಚಾಟ್‌ಗಳು, ಯುಪಿಐ ಹಣ ವರ್ಗಾವಣೆ ಸಾಕ್ಷ್ಯಗಳು ಮತ್ತು ಸ್ಕ್ರೀನ್‌ಶಾಟ್‌ಗಳ ಸಮೇತ ಬಜಪೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಸದ್ಯ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರು ತನಿಖೆಯನ್ನು ಸಿಸಿಬಿಗೆ (CCB) ಹಸ್ತಾಂತರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ವಾಸ್ತವಾಂಶ ತಿಳಿಯಲು ತನಿಖೆ ಚುರುಕುಗೊಳಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post