ಪುತ್ತೂರು: ಸೆ.6ರಂದು ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿ ಎಂಬಲ್ಲಿ ಮನೆ ಮಂದಿಯನ್ನು ಕಟ್ಟಿಹಾಕಿ ದರೋಡೆ ನಡೆಸಿದ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಕೇರಳ ಮೂಲದ ಐವರು ಸೇರಿದಂತೆ ಒಟ್ಟು ಆರು ಮಂದಿ ಯನ್ನು ಬಂಧಿಸಿ, ದರೋಡೆ ನಡೆಸಿದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿ ಗ್ರಾಮದ ಕಿಣಿಯರ ಪಾಲು ನಿವಾಸಿ ಸುಧೀರ್(38), ಕಾಸರಗೋಡು ಪೈವಳಿಕೆ ಸಮೀಪದ ಮಂಜೇಶ್ವರ ಗ್ರಾಮದ ಅಟ್ಟೆಗೋಳಿ ಮಂಜಳ್ತೋಡಿ ನಿವಾಸಿ ಕಿರಣ್ ಟಿ (29), ಕಾಸರಗೋಡು ಜಿಲ್ಲೆಯ ಕಾಂಞಗಾಡ್ ಸಮೀಪದ ಮೂವರಿಕುಂಡ ಕಂಡತ್ತೀಲ್ ವೀಡು ನಿವಾಸಿ ಸನಾಲ್ ಕೆ.ವಿ ( 34), ಕಾಸರಗೋಡು ತಾಲೂಕಿನ ಎಡನಾಡು ಗ್ರಾಮದ ಮುಗು ಸೀತಂಗೋಳಿ ನಿವಾಸಿ ಫೈಝಲ್ (37), ಸೀತಂಗೋಳಿಯ ಅಬ್ದುಲ್ ನಿಝಾರ್ (21) ಮತ್ತು ಮಂಜೇಶ್ವರ ತಾಲೂಕಿನ ಶೇಣಿ ಗ್ರಾಮದ ಹೊಸಗದ್ದೆ ನಿವಾಸಿ ವಸಂತ ಎಂ (31) ಬಂಧಿತ ಆರೋಪಿಗಳು.
ಮುಸುಕುಧಾರಿ ದರೋಡೆಕೋರರ ತಂಡವೊಂದು ಸೆ.6 ರಂದು ತಡರಾತ್ರಿ ವೇಳೆ ಬಡಗನ್ನೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕಾಂಗ್ರೆಸ್ ಮುಖಂಡ ಗುರುಪ್ರಸಾದ್ ರೈ ಅವರ ಕುದ್ಕಾಡಿ ತೋಟದಮೂಲೆ ಎಂಬಲ್ಲಿರುವ ಮನೆಯ ಹಿಂಬದಿಯ ಬಾಗಿಲು ಒಡೆದು ಒಳನುಗ್ಗಿ ಗುರುಪ್ರಸಾದ್ ಅವರನ್ನು ಕಟ್ಟಿಹಾಕಿ, ಅವರ ತಾಯಿ ಕಸ್ತೂರಿ ರೈ ಅವರಿಗೆ ಮಾರಕಾಯುಧಗನ್ನು ಹಿಡಿದು ಬೆದರಿಸಿ ಸೋಫಾದಲ್ಲಿ ಕುಳ್ಳಿರಿಸಿ, ಚಿನ್ನದ ಸರ, 4 ಚಿನ್ನದ ಬಳೆಗಳ ಸಹಿತ ಒಟ್ಟು ರೂ.2.40 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ರೂ.30 ಸಾವಿರ ನಗದು ದರೋಡೆ ಮಾಡಿತ್ತು. ಈ ಪ್ರಕರಣದ ಎಲ್ಲ 6 ಆರೋಪಿಗಳನ್ನು ಬಂಧಿಸಿದ ಬಳಿಕ ಎಸ್ಪಿ ರಿಷ್ಯಂತ್ ಮಾದ್ಯಮಗಳಿಗೆ ಮಾಹಿತಿ ನೀಡಿದರು.
ಪೆರೋಲ್ ಮೇಲೆ ಹೊರ ಬಂದು ಕೃತ್ಯ ಎಸಗಿದ್ದ : ಕೆಲವು ವರ್ಷಗಳ ಹಿಂದೆ ಇಡೀ ಕರಾವಳಿ ಮತ್ತು ಕಾಸರಗೋಡು ಜಿಲ್ಲೆಗಳನ್ನೇ ಬೆಚ್ಚಿ ಬೀಳಿಸಿದ ಪೆರ್ಲ ಜಬ್ಬಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಚ್ಚಂಬಳ ರವಿ ಜೀವಾವಧಿ ಶಿಕ್ಷೆಗೆ ಒಳಪಟ್ಟು ಕೇರಳದ ಕಣ್ಣೂರು ಸೆಂಟ್ರಲ್ ಜೈಲ್ ನಲ್ಲಿದ್ದ. ಇತ್ತೀಚೆಗೆ ಪೆರೋಲ್ ಮೇಲೆ ಹೊರ ಬಂದು ಈ ಕೃತ್ಯವನ್ನು ನಡೆಸಿಬಳಿಕ ಮತ್ತೆ ಜೈಲಿನೊಳಗೆ ಸೇರಿಕೊಂಡಿದ್ದ ಎಂದು ತಿಳಿದು ಬಂದಿದೆ. ಈತ ಸುಮಾರು 5 ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ಈತನನ್ನು ಇನ್ನಷ್ಟೇ ವಶಕ್ಕೆ ಪಡೆಯಬೇಕಾಗಿದೆ. ಈತ ಸೇರಿದಂತೆ ಒಟ್ಟು ಏಳು ಮಂದಿ ಸೇರಿ ದರೋಡೆ ಎಸಗಿದ್ದು ಈ ಪೈಕಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಉಪ ಅಧೀಕ್ಷಕಿ ಡಾ. ಗಾನ ಪಿ. ಕುಮಾರ್ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ. ಎಸ್. ನೇತೃತ್ವದಲ್ಲಿ ಪುತ್ತೂರು ಸಂಚಾರ ಪೊಲೀಸ್ ಠಾಣಾ ಉಪನಿರೀಕ್ಷಕ ಉದಯರವಿ ಎಂ. ವೈ., ಪುತ್ತೂರು ಗ್ರಾಮಾಂತರ ಠಾಣಾ ಉಪನಿರೀಕ್ಷಕ ಧನಂಜಯ ಬಿ. ಸಿ., ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ರುಕ್ಮ ನಾಯ್ಕ, ಉಪ್ಪಿನಂಗಡಿ ಠಾಣಾ ಹೆಚ್ ಸಿ ಹರೀಶ್ಚಂದ್ರ, ವೇಣೂರು ಠಾಣಾ ಹೆಚ್ ಸಿ ಪ್ರವೀಣ್ ಮೂರುಗೋಳಿ, ವಿಟ್ಲ ಪೊಲೀಸ್ ಠಾಣಾ ಹೆಚ್ ಸಿ ಉದಯ ರೈ, ಪುತ್ತೂರು ಗ್ರಾಮಾಂತರ ವೃತ್ತ ಕಛೇರಿಯ ಹೆಚ್ ಸಿ ಅಬ್ದುಲ್ ಸಲೀಂ, ಪಿಸಿ ಜಗದೀಶ್ ಅತ್ತಾಜೆ, ಎ.ಹೆಚ್.ಸಿ ಹರೀಶ್, ಪುತ್ತೂರು ಗ್ರಾಮಾಂತರ ಠಾಣಾ ಎ.ಎಸ್.ಐ ಮುರುಗೇಶ್, ಹೆಚ್.ಸಿ. ಪ್ರವೀಣ್ ರೈ, ಹೆಚ್.ಸಿ. ಅದ್ರಾಮ್, ಹೆಚ್.ಸಿ. ಬಾಲಕೃಷ್ಣ, ಹೆಚ್.ಸಿ. ಹರೀಶ್, ಹೆಚ್.ಸಿ. ಪ್ರಶಾಂತ್, ಪಿ.ಸಿ. ಮುನಿಯ ನಾಯ್ಕ, ಪುತ್ತೂರು ಸಂಚಾರ ಠಾಣಾ ಹೆಚ್.ಸಿ. ಪ್ರಶಾಂತ್ ರೈ, ಪುತ್ತೂರು ನಗರ ಠಾಣಾ ಪಿಸಿ ವಿನಾಯಕ ಎಸ್. ಬಾರ್ಕಿ, ಪಿಸಿ ಶರಣಪ್ಪ ಪಾಟೀಲ್, ಬಂಟ್ವಾಳ ಸಂಚಾರ ಠಾಣಾ ಪಿಸಿ ವಿವೇಕ್, ಪಿಸಿ ಕುಮಾರ್ ಕೆ., ಜಿಲ್ಲಾ ಗಣಕಯಂತ್ರ ವಿಭಾಗದ ಎಹೆಚ್.ಸಿ ಸಂಪತ್ ಕುಮಾರ್, ಸಿಪಿಸಿ ದಿವಾಕರ್, ವಾಹನ ಚಾಲಕ ಪ್ರವೀಣ್ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ, ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡಕ್ಕೆ ನಗದು ಬಹುಮಾನ ಮತ್ತು ಉತ್ತಮ ಸೇವಾ ಪತ್ರ ನೀಡಿ ಗೌರವಿಸಲಾಗುವುದು ಎಂದು ಎಸ್‍ಪಿ ಅವರು ತಿಳಿಸಿದರು.
Discussion about this post