ಮಂಗಳೂರು, ಸೆ.29:ನಗರದ ಬಾವುಟಗುಡ್ಡೆಯಲ್ಲಿರುವ ಜಿಲ್ಲಾ ನ್ಯಾಯಾಲಯದ ಸಮೀಪದ ಕೋರ್ಟ್ ಕ್ರಾಸ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಗೂಡ್ಸ್ ಆಟೋರಿಕ್ಷಾ, ನ್ಯಾಯಾಧೀಶರ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಗೂಡ್ಸ್ ಆಟೋ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನಗರದ ಕರಂಗಲ್ಪಾಡಿಯಲ್ಲಿ ಬೆಳಗ್ಗೆ ಹತ್ತು ಗಂಟೆಗೆ ಘಟನೆ ನಡೆದಿದ್ದು ಕೋರ್ಟ್ ರಸ್ತೆಯಿಂದ ಬರುತ್ತಿದ್ದ ಗೂಡ್ಸ್ ಆಟೋ ರಿಕ್ಷಾ ನೇರವಾಗಿ ಬಂದು ಕರಂಗಲ್ಪಾಡಿ ಮುಖ್ಯ ರಸ್ತೆಯಿಂದ ಕೋರ್ಟ್ ರಸ್ತೆಗೆ ತಿರುವು ಪಡೆಯುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಕಾರನ್ನು ಸ್ವತಃ ನ್ಯಾಯಾಧೀಶ ವಿನಯ್ ಅವರು ಚಲಾಯಿಸುತ್ತಿದ್ದರು.
ಚಿಕಿತ್ಸೆ ಫಲಿಸದೆ ಚಾಲಕ ಸಾವು: ಅಪಘಾತದ ತೀವ್ರತೆಗೆ ಗೂಡ್ಸ್ ಆಟೋರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಚಂದ್ರ ಕೆ. ಅವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ದೃಢಪಡಿಸಿದ್ದಾರೆ.
ಅಪಘಾತದಲ್ಲಿ ಕಾರಿನಲ್ಲಿದ್ದ ನ್ಯಾಯಾಧೀಶ ವಿನಯ್ ಡಿ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಕೂಟರ್ ಸವಾರ ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತಕ್ಕೀಡಾದ ಮೂರೂ ವಾಹನಗಳು ಭಾಗಶಃ ನಜ್ಜುಗುಜ್ಜಾಗಿವೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಕದ್ರಿ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 130/2026 ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281, 125(a), 125(b) ಹಾಗೂ ಮೋಟಾರು ವಾಹನ ಕಾಯ್ದೆಯಡಿ (IMV Act) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ವಿನಯ್ ಅವರ ದೂರಿನಂತೆ ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಂದ್ರ ಅವರು ಕಾಸರಗೋಡು ಜಿಲ್ಲೆಯ ಮೊಗ್ರಾಲ್ ನಿವಾಸಿಯಾಗಿದ್ದು ಮಂಗಳೂರಿನಲ್ಲಿ ಕಲ್ಪನಾ ಸ್ವೀಟ್ಸ್ ಶಾಪ್ ಗೆ ಸೇರಿದ ಗೂಡ್ಸ್ ಆಟೋದಲ್ಲಿ ಚಾಲಕರಾಗಿದ್ದರು. ಅಪಘಾತ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಆಟೋ ನೇರವಾಗಿ ಬಂದು ಕಾರಿಗೆ ಡಿಕ್ಕಿಯಾಗಿದ್ದು ಕಂಡುಬಂದಿದೆ. ಹೀಗಾಗಿ ಆಟೋ ಚಾಲಕ ಕಣ್ಣು ಮಂಜಾಗಿ ಅಥವಾ ಏನಾದ್ರೂ ಸಮಸ್ಯೆ ಉಂಟಾಗಿ ಕಾರಿಗೆ ಡಿಕ್ಕಿಯಾಗಿರುವ ಸಾಧ್ಯತೆಯಿದೆ. ಸ್ವಲ್ಪನಾದ್ರೂ ಬ್ರೇಕ್ ಹಾಕುತ್ತಿದ್ದರೆ ಆಟೋ ಮುಂಭಾಗ ಅಪ್ಪಚ್ಚಿ ಆಗುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post