ಕೋಲ್ಕತ್ತಾ, ಮೇ 7: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯದ ವಿವಿಧೆಡೆ ಭೀಕರ ಹಿಂಸಾಚಾರ ಭುಗಿಲೆದ್ದಿದೆ. ಬುಧವಾರ ರಾತ್ರಿ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದ ದೋಹಾರಿಯಾ ಪ್ರದೇಶದಲ್ಲಿ ಬಿಜೆಪಿ ನಾಯಕ ಮತ್ತು ಭಾವಿ ಮುಖ್ಯಮಂತ್ರಿ ಅಭ್ಯರ್ಥಿ ಎನ್ನಲಾದ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ, ಬಿಜೆಪಿ ಇದನ್ನು ‘ಟಾರ್ಗೆಟ್ ಕಿಲ್ಲಿಂಗ್’ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಈ ಘಟನೆಯು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪೊಲೀಸ್ ಮೂಲಗಳ ಪ್ರಕಾರ, ಬುಧವಾರ ರಾತ್ರಿ ಸುಮಾರು 10.20ಕ್ಕೆ ಚಂದ್ರನಾಥ್ ರಥ್ ಅವರು ಬಾರಾಸಾತ್‌ನಲ್ಲಿರುವ ತಮ್ಮ ಮನೆಗೆ ಕಾರಿನಲ್ಲಿ ಮರಳುತ್ತಿದ್ದರು. ದೋಹಾರಿಯಾ ಪ್ರದೇಶದಲ್ಲಿ ಮೋಟಾರ್ ಸೈಕಲ್‌ಗಳಲ್ಲಿ ಬಂದ ಅಪರಿಚಿತರು ಅವರ ಕಾರನ್ನು ಅಡ್ಡಗಟ್ಟಿದ್ದಾರೆ. ಒಬ್ಬ ವ್ಯಕ್ತಿ ಕಾರಿನ ಕಿಟಕಿಯ ಹತ್ತಿರ ಬಂದು ಚಂದ್ರನಾಥ್ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ರಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕಾರು ಚಾಲಕನನ್ನು ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತ್ಯಕ್ಷದರ್ಶಿಗಳು ಹೇಳುವಂತೆ, ರಥ ಅವರನ್ನು ಕರೆದೊಯ್ಯುತ್ತಿದ್ದ ವಾಹನವನ್ನು ಮೊದಲು ದೊಹಾರಿಯಾ ಜಂಕ್ಷನ್ ಬಳಿ ಸಣ್ಣ ನಾಲ್ಕು ಚಕ್ರದ ವಾಹನವೊಂದು ತಡೆದಿತ್ತು. ನಂತರ ಮೋಟಾರ್ ಸೈಕಲ್ ಸವಾರನೊಬ್ಬ ಎಸ್‌ಯುವಿ ಬಳಿ ಬಂದು ಹತ್ತಿರದಿಂದ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ. ನಾಲ್ಕು ಚಕ್ರದ ವಾಹನದಲ್ಲಿದ್ದವರು ನಂತರ ವಾಹನವನ್ನು ಅಲ್ಲೇ ಬಿಟ್ಟು ಮೋಟಾರ್ ಸೈಕಲ್‌ನಲ್ಲಿ ಪರಾರಿಯಾಗಿದ್ದಾರೆ.
ರಥ್ ಅವರನ್ನು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟರು ಎಂದು ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ. ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಕಾರ್ಯನಿರ್ವಾಹಕ ಸಹಾಯಕರಾಗಿ ಸೇವೆ ಸಲ್ಲಿಸಿದ್ದ ರಥ್, ಮಧ್ಯಮಗ್ರಾಮ್‌ನಲ್ಲಿರುವ ತಮ್ಮ ನಿವಾಸಕ್ಕೆ ಹಿಂತಿರುಗುತ್ತಿದ್ದಾಗ ದಾಳಿ ನಡೆದಿದೆ.
Discover more from Coastal Times Kannada
Subscribe to get the latest posts sent to your email.







Discussion about this post