ಸುರತ್ಕಲ್: ಇಲ್ಲಿನ ಪೆಟ್ರೋಲ್ ಬಂಕ್ ರಸ್ತೆ ಬಳಿ ನಿಲ್ಲಿಸಿದ್ದ ಸಿಮೆಂಟ್ ತುಂಬಿದ ಟ್ರಕ್ ಹಿಮ್ಮುಖವಾಗಿ ಚಲಿಸಿದ ಪರಿಣಾಮ ಓರ್ವ ಗಂಭೀರ ಗಾಯಗೊಂಡು, ನಾಲ್ಕು ಕಾರುಗಳು ಮತ್ತು ದ್ವಿಚಕ್ರ ವಾಹನ ಹಾಗೂ ಬಟ್ಟೆ ಮಳಿಗೆ ಜಖಂಗೊಂಡ ಘಟನೆ ಸುರತ್ಕಲ್ ನಲ್ಲಿ ಮಂಗಳವಾರ ಸಂಜೆ ನಡೆದಿದೆ.
ಸಂಜೆ ಐದೂವರೆ ವೇಳೆ ಈ ಘಟನೆ ಸಂಭವಿಸಿದ್ದು, ಸರಕು ಹೇರಿಕೊಂಡಿದ್ದ ಲಾರಿಯನ್ನು ರೋರೋ ರೈಲಿನಲ್ಲಿ ತೆರಳುವ ಸಲುವಾಗಿ ಸುರತ್ಕಲ್ ಪೇಟೆಯಲ್ಲಿ ನಿಲ್ಲಿಸಲಾಗಿತ್ತು. ಚಾಲಕ ಲಾರಿಯನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಹೊರಗೆ ತೆರಳಿದ್ದ ಎನ್ನಲಾಗಿದೆ. ಈ ವೇಳೆ ರೈಲ್ವೇ ನಿಲ್ದಾಣದ ರಸ್ತೆಯ ಭಾರತ್ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಲಾರಿ ಹಿಮ್ಮುಖವಾಗಿ ಚಲಿಸಿದ್ದು ಎದುರಿನ ಮೂಡ ಮಾರುಕಟ್ಟೆಯ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಕಾರಿನ ಬಳಿ ನಿಂತಿದ್ದ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸುರತ್ಕಲ್ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Discussion about this post