ಉಳ್ಳಾಲ: ಭೂಸ್ವಾಧೀನ ಪ್ರಕ್ರಿಯೆ ನಡೆಸದೆ ಭೂಮಾಲೀಕರಿಗೆ ಪರಿಹಾರಧನ ನೀಡದೆ ಆರಂಭಿಸಿದ್ದ ಹರೇಕಳ-ಅಡ್ಯಾರ್ ಸಂಪರ್ಕ ಸೇತುವೆ ಹಾಗೂ ಅಣೆಕಟ್ಟು ನಿರ್ಮಾಣದ ಕಾಮಗಾರಿಯನ್ನು ತಕ್ಷಣಕ್ಕೆ ಸ್ಥಗಿತಗೊಳಿಸಿ, ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಪಾಡುವಂತೆ ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದ್ದು, ಕಾಮಗಾರಿ ಸ್ಥಗಿತಗೊಂಡಿದೆ.


ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ ಅಡ್ಯಾರ್ -ಹರೇಕಳ ಸಂಪರ್ಕಿಸುವಲ್ಲಿ ನೇತ್ರಾವತಿ ನದಿಗೆ ಪಶ್ಚಿಮವಾಹಿನಿ ಯೋಜನೆಯಲ್ಲಿ ಸೇತುವೆ ಸಹಿತ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣ 215.62 ಕೋಟಿ ರೂ. ಅನುದಾನದಲ್ಲಿ 2020ಕ್ಕೆ ಟೆಂಡರ್ ಆಗಿ 2021ಕ್ಕೆ ಕಾಮಗಾರಿ ಆರಂಭಿಸಲಾಗಿತ್ತು. ಸೇತುವೆ ಕಾಮಗಾರಿ ಸಂಪೂರ್ಣ ಮುಗಿದಿದ್ದರೂ, ಎರಡು ಕಡೆಗಳಲ್ಲಿ ಸಂಪರ್ಕಿಸುವ ರಸ್ತೆಗೆ ಜಾಗದ ತಕರಾರು ಇರುವುದರಿಂದ ಹಾಗೆಯೇ ಉಳಿದಿದೆ. ಈ ನಡುವೆ ಸೇತುವೆ ಬದಿಯ ಭೂಮಾಲೀಕರಾಗಿರುವ ಕಡೆಂಜ ಮೋಹನದಾಸ್ ರೈ ಸೇರಿದಂತೆ ಐವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

2020ರಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಾಯಕ ಅಭಿಯಂತರರು ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ನೀಡಿರುವ ಜಾಹೀರಾತಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳಲಿರುವ ಪ್ರದೇಶದ ಸುತ್ತಲಿನ 110 ಎಕರೆ ಭೂಮಿ ನೀರಿನಿಂದ ಮುಳುಗುವ ಸಂಭವ ಇದೆ. ಈ ಭಾಗದ ಭೂ ಒತ್ತುವರಿ ಪ್ರಕ್ರಿಯೆ ತಕ್ಷಣದಿಂದ ಆರಂಭವಾಗಲಿದೆ. ಸ್ಥಳೀಯರು ಸಹಕರಿಸುವಂತೆ ಕೋರಿ ಪ್ರಕಟಣೆ ನೀಡಿದ್ದರು. ಆದರೆ, ಸೇತುವೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಮುಳುಗಡೆಯಾಗಲಿರುವ ಪ್ರದೇಶದ ಭೂ ಒತ್ತುವರಿ ಸಂಬಂಧ ಭೂಮಾಲೀಕರಿಗೆ ನೋಟಿಸ್ ಅನ್ನೂ ನೀಡಿಲ್ಲ. ಅಲ್ಲದೆ, ಮಾಹಿತಿಯನ್ನು ನೀಡದೆ ಕಾಮಗಾರಿಯನ್ನು ಮುಂದುವರಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದರು.

ಎರಡು ವರ್ಷಗಳ ಹಿಂದೆಯೇ ಹರೀಶ್ ಶೆಟ್ಟಿ ಎಂಬುವವರು ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿಯನ್ನು ಕೇಳಿದ್ದರೂ ಈವರೆಗೆ ಮಾಹಿತಿಗಳನ್ನು ನೀಡಲಾಗಿಲ್ಲ. ಮೂರು ತಿಂಗಳ ಹಿಂದೆ ಕಡೆಂಜ ಮೋಹನದಾಸ್ ರೈ ಅವರು ಮಾಹಿತಿಯನ್ನು ಕೇಳಿದ್ದರೂ ಈವರೆಗೂ ಮಾಹಿತಿ ದೊರಕಿಲ್ಲ. ಈಗ ಹೈಕೋರ್ಟ್‌ನಲ್ಲಿ ಡಿ. 16ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ಯಾವುದೇ ಕಾಮಗಾರಿ ನಡೆಸದಂತೆ ಆದೇಶದಲ್ಲಿ ತಿಳಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post