ಟೆಲಿಗ್ರಾಮ್‌ಗೆ ತಾತ್ಕಾಲಿಕ ನಿಷೇಧ: ನೀಟ್ ಯುಜಿ ಮರುಪರೀಕ್ಷೆಗಾಗಿ ಕೇಂದ್ರ ಸರ್ಕಾರ ವಿಧಿಸಿರುವ ತಾತ್ಕಾಲಿಕ ನಿಷೇಧವನ್ನು ಪ್ರಶ್ನಿಸಿ ಟೆಲಿಗ್ರಾಮ್ ಆ್ಯಪ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು ವಜಾಗೊಳಿಸಿತು. ಐಟಿ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಹೊರಡಿಸಲಾದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ನ್ಯಾಯಪೀಠ, ಜೂನ್ 22ರವರೆಗೆ ಟೆಲಿಗ್ರಾಮ್ ನಿರ್ಬಂಧಿಸುವ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿಯಿತು.
ತುರ್ತು ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಐಟಿ ಕಾಯ್ದೆಯ ಸೆಕ್ಷನ್-69 ಎ ಅಡಿಯಲ್ಲಿ ಸೂಚಿಸಲಾದ ಕಾರ್ಯವಿಧಾನವನ್ನು ಅನುಸರಿಸಿದೆ. ಈ ವೇದಿಕೆದೆ ಐಟಿ ಕಾಯ್ದೆಯ ವ್ಯಾಪ್ತಿಯಿಂದ ವಿನಾಯಿತಿ ನೀಡಲು ಯಾವುದೇ ಕಾರಣವಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ. ಐಟಿ ಕಾಯ್ದೆಯು ಸರ್ಕಾರಕ್ಕೆ ಸಂಪೂರ್ಣ ವೇದಿಕೆ ಅಥವಾ ಅಪ್ಲಿಕೇಶನ್ ಅನ್ನು ನಿಷೇಧಿಸಲು ಅಧಿಕಾರ ನೀಡುತ್ತದೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮ ಮತ್ತು ಸಂದೇಶ ಕಳುಹಿಸುವ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್‌ಗಳು ಇಲ್ಲಿನ ಕಾನೂನಿನ ವ್ಯಾಪ್ತಿಯಿಂದ ಹೊರಗುಳಿಯಲು ಸಾಧ್ಯವಿಲ್ಲ. ಸಂವಿಧಾನಕ್ಕೆ ಅನುಸಾರವಾಗಿಯೇ ಕಾರ್ಯನಿರ್ವಹಿಸಬೇಕು ಎಂದು ಸ್ಪಷ್ಟಪಡಿಸಿದೆ.
ಜೂನ್ 21ರಂದು ನೀಟ್ ಮರು ಪರೀಕ್ಷೆ ನಡೆಯಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರ ಟೆಲಿಗ್ರಾಮ್ ಮೇಲೆ ತಾತ್ಕಾಲಿಕ ನಿಷೇಧ ಹೇರಿತ್ತು. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಟೆಲಿಗ್ರಾಮ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಗಂಭೀರ ಆರೋಪಗಳು: ಟೆಲಿಗ್ರಾಮ್ ವೇದಿಕೆಯನ್ನು ವಿವಿಧ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು. ಇದು ಅಕ್ರಮ ವಸ್ತುಗಳ ಮಾರಾಟದಂತಹ ಚಟುವಟಿಕೆಗಳಿಗೆ ಅನೇಕರು ಬಳಸುವ ವೇದಿಕೆ ಎಂದು ಆರೋಪಿಸಿದರು.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ಭಾರತೀಯ ನ್ಯಾಯಾಂಗದ ಮುಂದೆ ಬಂದಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಮೆಟಾ ವಾಟ್ಸಾಪ್ ಮೇಲೆ ವಿಧಿಸಲಾದ ದಂಡವನ್ನು ಪ್ರಶ್ನಿಸಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. 2024ರಲ್ಲಿ ಭಾರತದ ಸ್ಪರ್ಧಾ ಆಯೋಗ (CCI) ವಾಟ್ಸಾಪ್ ಮೇಲೆ ₹213 ಕೋಟಿ ದಂಡ ವಿಧಿಸಿತ್ತು.
Discover more from Coastal Times Kannada
Subscribe to get the latest posts sent to your email.







Discussion about this post