ಕೋಲ್ಕತ್ತಾ, ಮೇ 22: ಪಶ್ಚಿಮ ಬಂಗಾಳದಲ್ಲಿ ಇದೀಗ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಮಾನ್ಯತೆ ಪಡೆದ ಮದರಸಾಗಳಲ್ಲಿ ತರಗತಿಗಳು ಆರಂಭವಾಗುವ ಮೊದಲು ‘ವಂದೇ ಮಾತರಂ’ ಹಾಡುವುದು ಕಡ್ಡಾಯಗೊಳಿಸಲಾಗಿದೆ. ರಾಜ್ಯ ಮದರಸಾ ಶಿಕ್ಷಣ ನಿರ್ದೇಶನಾಲಯ ಈ ಕುರಿತು ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರಲಿದೆ.
ಮದರಸಾ ಶಿಕ್ಷಣ ನಿರ್ದೇಶನಾಲಯ ಹೊರಡಿಸಿರುವ ಸೂಚನೆಯಲ್ಲಿ, ಈ ಹಿಂದೆ ಇದ್ದ ಎಲ್ಲ ಪದ್ಧತಿ ಮತ್ತು ಆದೇಶಗಳನ್ನು ರದ್ದುಗೊಳಿಸಿ, ರಾಜ್ಯದ ಸರ್ಕಾರಿ ಮಾದರಿ ಮದರಸಾಗಳು, ಸರ್ಕಾರಿ ಅನುದಾನಿತ ಮದರಸಾಗಳು, ಮಾನ್ಯತೆ ಪಡೆದ ಅನುದಾನರಹಿತ ಮದರಸಾಗಳು, ಎಂಎಸ್‌ಕೆ ಹಾಗೂ ಎಸ್‌ಎಸ್‌ಕೆ ಸಂಸ್ಥೆಗಳಲ್ಲಿ ಪ್ರತಿದಿನ ಪ್ರಾರ್ಥನಾ ಸಭೆಯಲ್ಲಿ ‘ವಂದೇ ಮಾತರಂ’ ಹಾಡುವುದು ಕಡ್ಡಾಯ ಎಂದು ತಿಳಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ ಸಚಿವ ಖುದಿರಾಮ್ ತುಡು, “ಬಂಗಾಳದ ಅನೇಕ ಸರ್ಕಾರಿ ಶಾಲೆಗಳಲ್ಲಿ ಸಂತಾಲಿ ಭಾಷೆಯಲ್ಲಿ ಪಾಠ ನಡೆಯುತ್ತಿದ್ದರೂ ಅಲ್ಲಿ ವಂದೇ ಮಾತರಂ ಹಾಡಲಾಗುತ್ತದೆ. ಹಾಗಿದ್ದರೆ ಮದರಸಾಗಳಲ್ಲೂ ಅದನ್ನು ಜಾರಿಗೆ ತರಲು ಯಾವುದೇ ಸಮಸ್ಯೆ ಇಲ್ಲ” ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಮೇ 13ರಂದು ರಾಜ್ಯ ಶಿಕ್ಷಣ ಇಲಾಖೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿತ್ತು. ಇದೀಗ ಅದೇ ನಿಯಮವನ್ನು ಮದರಸಾಗಳಿಗೂ ವಿಸ್ತರಿಸಲಾಗಿದೆ.
ಸದ್ಯ ಈ ಆದೇಶವನ್ನು ಹೇಗೆ ಅನುಷ್ಠಾನಗೊಳಿಸಲಾಗುತ್ತದೆ, ನಿಯಮ ಉಲ್ಲಂಘನೆ ಮಾಡಿದರೆ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಕುರಿತು ಸ್ಪಷ್ಟ ಮಾರ್ಗಸೂಚಿಗಳು ಇನ್ನೂ ಪ್ರಕಟವಾಗಿಲ್ಲ. ಆದರೆ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರೀಯ ಏಕತೆ ಮತ್ತು ಸಂವಿಧಾನ ಮೌಲ್ಯಗಳನ್ನು ಬಲಪಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post