ಬೆಳ್ತಂಗಡಿ : ಅಯ್ಯಪ್ಪ ಮಾಲಾಧಾರಿಗಳು ಪ್ರಯಾಣಿಸುತ್ತಿದ್ದ ಮಿನಿ ಬಸ್ ಒಂದು ಇದ್ದಕ್ಕಿದ್ದಂತೆಯೇ ಬ್ರೇಕ್ ಫೇಲ್ ಆಗಿ ಕಾಡಿನ ಒಳಗೆ ನುಗ್ಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಬಳಿ ನಡೆದಿದೆ. ಬಸ್ಸಿನಲ್ಲಿ21 ಜನರಿದ್ದು, ಈ ಪೈಕಿ 15 ಜನರಿಗೆ ಗಾಯಗಳಾಗಿವೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.


ಬಳ್ಳಾರಿಯ ಜಿಲ್ಲೆಯ ಕೂಡ್ಲಿಗಿ ತಾಲೂಕಿನ 21 ಜನ ಮಿನಿ ಬಸ್‌ನಲ್ಲಿ ಶಬರಿಮಲೆಗೆ ಪ್ರಯಾಣಿಸುತ್ತಿದ್ದರು. ಬಸ್ಸು ಮುಂಡಾಜೆ ಬಳಿ ಒಮ್ಮೆಗೇ ಬ್ರೇಕ್ ಫೇಲ್ ಆಗಿದ್ದರಿಂದ ಕೂಡಲೇ ನಿಲ್ಲಿಸುವ ಉದ್ದೇಶದಿಂದ ಎಂಬಂತೆ ಚಾಲಕ ರಸ್ತೆ ಬದಿಯ ಕಾಡಿನ ಕಡೆಗೆ ನುಗ್ಗಿಸಿದ್ದಾನೆ. ಪಕ್ಕದ ಅಡೆತಡೆಗಳಿಂದಾಗಿ ಬಸ್ಸು ಮುಂದೆ ಚಲಿಸದೆ ನಿಂತಿದೆ. ಹೀಗಾಗಿ ದೊಡ್ಡ ಅಪಾಯ ತಪ್ಪಿದೆ. ಆದರೆ ಏಕಾಏಕಿ ವಾಹನ ಎರ‍್ರಾಬಿರ‍್ರಿ ಚಲಿಸಿದ್ದರಿಂದ ಹಲವರಿಗೆ ಗಾಯಗಳಾಗಿದೆ.


ವಿಷಯ ತಿಳಿಯುತ್ತಿದ್ದಂತೆಯೇ ಆರು ಆಂಬ್ಯುಲೆನ್ಸ್‌ಗಳು ಧಾವಿಸಿದ್ದು, ಬೆಳ್ತಂಗಡಿ ಸಂಚಾರಿ ಪೊಲೀಸರು ಕೂಡಾ ದೌಡಾಯಿಸಿದ್ದಾರೆ. ಬಾಲಕ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಮಂಗಳೂರು ಮತ್ತು ಎಸ್.ಡಿ.ಎಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 15 ಮಂದಿಗೆ ಕಕ್ಕಿಂಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬೇರೆ ಆಸ್ಪತ್ರೆಗೆ ಕಳುಹಿಸಲಾಯಿತು.
Discover more from Coastal Times Kannada
Subscribe to get the latest posts sent to your email.







Discussion about this post