ಸುರತ್ಕಲ್, ಡಿ.25: ಕಳೆದ ರಾತ್ರಿ ದುಷ್ಕರ್ಮಿಗಳಿಂದ ಕೊಲೆಯಾದ ಕೃಷ್ಣಾಪುರ 9ನೇ ಬ್ಲಾಕ್ ನಿವಾಸಿ ಅಬ್ದುಲ್ ಜಲೀಲ್ ಹತ್ಯೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸ್ಥಳೀಯರು ಸ್ಥಳದಲ್ಲಿ ಧರಣಿ ಆರಂಭಿಸಿದ್ದಾರೆ.


ಇಂದು ಮಧ್ಯಾಹ್ನ ವೇಳೆ 9ನೆ ಬ್ಲಾಕ್ ಜುಮಾ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿದ ಬಳಿಕ ನೆರೆದಿದ್ದ ಸಾವಿರಾರು ಮಂದಿ ಜಲೀಲ್ ಅವರ ಮೃತದೇಹವನ್ನು ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್ ಅನ್ನು ನಿಲ್ಲಿಸಿ ಧರಣಿ ಆರಂಭಿಸಿದ್ದು, ಆರೋಪಿಗಳ ಬಂಧನವಾಗದೇ ಅಂತ್ಯ ಸಂಸ್ಕಾರ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಕಂಡುಬಂದಿದೆ.

ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಮಾಜಿ ಶಾಸಕ ಮೊಯ್ದಿನ್ ಬಾವಾ, ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ, ಮಾಜಿ ಮೇಯರ್ ಅಶ್ರಫ್ ಮತ್ತಿತರ ಮುಖಂಡರು ಆಗಮಿಸಿದ್ದು, ಆಕ್ರೋಶಿತ ಜನರನ್ನು ಸಮಾಧಾನಪಡಿಸಲು ಹರಸಾಹಸ ಪಡುತ್ತಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಧರಣಿನಿರತರು ಒತ್ತಾಯಿಸುತ್ತಿದ್ದಾರೆ.


ಶನಿವಾರ ರಾತ್ರಿ ದುಷ್ಕರ್ಮಿಗಳಿಬ್ಬರು ಜಲೀಲ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದೆ. ಆಸ್ಪತ್ರೆಯಲ್ಲಿ ಜಲೀಲ್ ಮೃತಪಟ್ಟಿದ್ದರು. ರಾತ್ರಿ 8.30ರ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಇಬ್ಬರು ಯುವಕರು ಅಂಗಡಿಗೆ ಬಂದಿದ್ದರು. ಓರ್ವ ಮಾಸ್ಕ್ ಧರಿಸಿದ್ದು, ಇನ್ನೋರ್ವ ಟವೆಲನ್ನು ಮುಖಕ್ಕೆ ಕಟ್ಟಿಕೊಂಡಿದ್ದ ಎನ್ನಲಾಗಿದೆ.
ಇಂದು ಬೆಳಗ್ಗೆ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನೆರವೇರಿಸಿದ ಬಳಿಕ ಜಲೀಲ್ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಅಂತಿಮ ವಿಧಿವಿಧಾನದ ಬಳಿಕ ಇಲ್ಲಿನ 9ನೇ ಬ್ಲಾಕ್ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಲಾಯಿತು. ಆ ಬಳಿಕ ಮೃತದೇಹ ಹೊರತರುತ್ತಿದ್ದಂತೆ ಸೇರಿದ್ದ ಸಾವಿರಾರು ಮಂದಿ ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಧರಣಿ ಆರಂಭಿಸಿದ್ದಾರೆ. ಆರೋಪಿಗಳ ಬಂಧನವಾಗದೆ ದಫನ ಕಾರ್ಯ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post