ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ 2015ರಲ್ಲಿ ನಡೆದಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣದಲ್ಲಿ ಅಪರಾಧ ಸಾಬೀತಾಗಿದ್ದು, ಐವರನ್ನು ದೋಷಿಗಳೆಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಮಾನಿಸಿದೆ. ಶಿಕ್ಷೆ ಪ್ರಮಾಣ ಇನ್ನಷ್ಟೇ ಪ್ರಕಟವಾಗಬೇಕಿದೆ.
ಲಿತೇಶ್ ಪೂಜಾರಿ, ಶೋಭರಾಜ್, ಯುವರಾಜ್, ಪ್ರದೀಪ್ ಮತ್ತು ಉಮೇಶ್ ಕೊಂಬಾರ್ ದೋಷಿಗಳು. ಪ್ರಕರಣದಲ್ಲಿ ಶರಣ್ ಪೂಜಾರಿ, ಮಹೇಶ್ ಕುಮಾರ್, ಕಮಲಾಕ್ಷ ಪೂಜಾರಿ, ಸತೀಶ್ ಪೂಜಾರಿ (ನಿಧನ ರಾಗಿದ್ದಾರೆ) ಮತ್ತು ಲತೇಶ್ ನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ 2015ರ ನ.2ರಂದು ಮಾಡೂರು ಯೂಸುಫ್ ಅಲಿಯಾಸ್ ಮಾಡೂರು ಇಸುಬು (40) ನನ್ನು ಬೆಳಗ್ಗೆ ಕೊಲೆ ಮಾಡಲಾಗಿತ್ತು. ಮಧ್ಯ ಪ್ರವೇಶ ಮಾಡಿದ ಗಣೇಶ್ ಶೆಟ್ಟಿ ಎಂಬಾತನನ್ನೂ ಕೊಲೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ ಲಿತೇಶ್ ಪೂಜಾರಿ, ಶೋಭರಾಜ್, ಯುವರಾಜ್, ಪ್ರದೀಪ್, ಉಮೇಶ್ ಕೊಂಬಾರ್, ಶರಣ್ ಪೂಜಾರಿ, ಮಹೇಶ್ ಕುಮಾರ್, ಕಮಲಾಕ್ಷ ಪೂಜಾರಿ, ಸತೀಶ್ ಪೂಜಾರಿ, ಲತೀಶ್ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖಾಧಿಕಾರಿಯಾಗಿದ್ದ ಎಸಿಪಿ ತಿಲಕ್ ಚಂದ್ರ ಅವರು 2016ರ ಜ.28ರಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಅದರಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ಜಗದೀಶ್ ವಿ.ಎನ್ ಅವರು, ಐವರನ್ನು ದೋಷಿಗಳೆಂದು ತೀರ್ಮಾನಿಸಿ ಸೆ.28ರಂದು ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಮೋಹನ್ ವಾದ ಮಂಡಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post